Bio Energy Karnataka > ಪರಿಚಯ

ಪರಿಚಯ

ನಮ್ಮ ದೇಶದಲ್ಲಿ ಯತ್ಥೇಚ್ಚವಾಗಿ ಬೆಳೆಯುವ ಹೊಂಗೆ ಬೇವು, ಹಿಪ್ಪೆ ಸೀಮಾರೂಬಾ, ಕಾಡುಹರಳುಗಳಂತಹ ಅನೇಕ ಮರಗಿಡಗಳ ಬೀಜಗಳಿಂದ ಪಡೆಯುವ ತೈಲಗಳನ್ನು ಕಚ್ಚಾ ತೈಲಕ್ಕೆ ಪರ್ಯಾಯ ಇಂಧನವನ್ನಾಗಿ ಅಥವಾ ಜೈವಿಕ ಇಂಧನವನ್ನಾಗಿ ಬಳಸಬಹುದಾಗಿದೆ. ಅಲ್ಲದೆ ಇದರಿಂದ ದೊರೆಯುವ ಉಪ ಉತ್ಪನ್ನಗಳಾದ ಹಿಂಡಿ ಉತ್ತಮ ಸಾವಯವ ಗೊಬ್ಬರವಾಗಿದೆ, ಮರಗಳ ಎಲೆಯನ್ನು ಹಸಿರೆಲೆ ಗೊಬ್ಬರವಾಗಿಯೂ ಉಪಯೋಗಿಸಬಹುದಾಗಿದೆ. ಎಣ್ಣೆಯಿಂದ ಬಸ್ಸು ಲಾರಿ, ಟ್ರಾಕ್ಟರ್, ಕಾರು, ಜೀಪುಗಳಂತಹ ವಾಹನಗಳನ್ನು ಇಂಜಿನಲ್ಲಿ ಯಾವುದೇ ಬದಲಾವಣೆ ಮಾಡದೆ ಓಡಿಸಬಹುದು. ಕಾರ್ಖಾನೆಗಳ ಯಂತ್ರಗಳಲ್ಲಿ ಡೀಸೆಲ್‌ಗೆ ಪರ್ಯಾಯವಾಗಿ ಈ ಜೈವಿಕ ಇಂಧನ ಬಳಸಬಹುದು. ರೈಲುಗಳನ್ನು ಸಹ ಓಡಿಸಲು ಸಾಧ್ಯವಿದೆ. ರಾಜ್ಯದ ಕೃಷಿ ವಿಶ್ವ ವಿದ್ಯಾಲಯ (ಯು.ಎ.ಎಸ್.) ಭಾರಿತೀಯ ವಿದ್ಯಾ ಮಂದಿರ (ಐ.ಐ.ಎಸ್.ಸಿ)ಗಳು ಇಂತಹ ಸಂಶೋಧನೆಯಲ್ಲಿ ತೊಡಗಿವೆ. ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ.) 500 ಬಸ್ಸುಗಳನ್ನು ಓಡಿಸುತ್ತಿದೆ. ಹಂತಹಂತವಾಗಿ ಮುಂಬರುವ ದಿನಗಳಲ್ಲಿ 5500 ಬಸ್ಸುಗಳು ಪರಿಸರ ಸ್ನೇಹಿಯಾದ ಬಯೋ ಡೀಸೆಲ್‌ನಿಂದ ಓಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮ ಪರಿಸರ ಸ್ನೇಹಿ. ಈ ಕಾರ್ಯ ಕೆ.ಎಸ್.ಆರ್.ಟಿ.ಸಿ ಗಳಂತಹ ಸಾರಿಗೆ ಸಂಸ್ಥೆಗಳಿಗೆ ಹಾಗೂ ಜೈವಿಕ ಇಂಧನ ಉತ್ಪಾದಕರಿಗೆ ಲಾಭ ದೊರಕಿಸುವುದಲ್ಲದೆ, ವಿದೇಶೀ ವಿನಿಮಯ ಉಳಿಕೆ ಹಾಗೂ ಪರಾವಲಂಬನೆ ಕಡಿಮೆಗೊಳಿಸಿ ಸ್ವಾವಲಂಬನೆಗೆ ಹಂತ ಹಂತವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ.

ಜೈವಿಕ ಇಂಧನದ ವಿವಿಧ ರೀತಿಯ ಮೌಲ್ಯವರ್ಧನೆ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶದಲ್ಲೇ ಮಾಡಬಹುದಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಯ ಅವಕಾಶಗಳನ್ನು ಹೆಚ್ಚಿಸುವುದಲ್ಲದೇ, ರೈತರಿಗೆ ಹೆಚ್ಚುವರಿ ಆದಾಯ ತರಬಲ್ಲದು, ಗ್ರಾಮೀಣ ಪ್ರದೇಶದ ಇಂಧನದ ಅವಶ್ಯಕತೆಯನ್ನು ಅಲ್ಲೇ ತಯಾರಾದ ಇಂಧನಗಳಿಂದ ಪೂರೈಸಿ, ಹೆಚ್ಚುವರಿ ಇಂಧನವನ್ನು ಮಾರಾಟ ಮಾಡಬಹುದಾಗಿದೆ.

ಜೈವಿಕ ಇಂಧನ ಸಸಿಗಳನ್ನು ಕೃಷಿಗೆ ಯೋಗ್ಯವಾಗಿರದ ರಾಜ್ಯದ ೧೩.೫ ಲಕ್ಷ ಹೆ. ಬರಡು, ಬಂಜರು ಭೂ ಪ್ರದೇಶಗಳಲ್ಲಿ, ನದಿ ಕಾಲುವೆ, ಹಾಗೂ ರೈತರ ಜಮೀನಗಳ ಬೇಲಿ, ಬದುಗುಂಟ, ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಬೆಳೆಸಬಹುದಾಗಿದೆ. ಬಯಲು ಸೀಮೆ ಹಾಗೂ ಕಡಿಮೆ ಮಳೆಯಾಗುವ ಭೂ ಪ್ರದೇಶಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಸುಲಭವಾಗಿ ಬೆಳೆಸಬಹುದಾಗಿದೆ. ಅರಣ್ಯೀಕರಣದ ಜೊತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಉತ್ತಮ ಸಾವಯವ ಗೊಬ್ಬರದ ಜೊತೆಗೆ ರಾಷ್ಟ್ರಕ್ಕೆ ಸುರಕ್ಫಿತ ಇಂಧನವನ್ನೊದಗಿಸುವ ಮತ್ತು ರಾಷ್ಟ್ರದ ಇಂಧನ ಸುರಕ್ಷತೆಗೆ ಭದ್ರ ಬುನಾದಿ ಹಾಕಬಹುದಾಗಿದೆ.