Bio Energy Karnataka > ಸಮುದಾಯ ಭಾಗಿತ್ವ

ಸಮುದಾಯ ಭಾಗಿತ್ವ

ಕಾರ್ಯಕ್ರಮ ಅನುಷ್ಠಾನದಲ್ಲಿ ಸಮುದಾಯ ಸಹಭಾಗಿತ್ವ

ಸರ್ಕಾರ ರೂಪಿಸಿದ ಹಲವಾರು ಕಾರ್ಯಕ್ರಮಗಳ ಮೂಲ ಉದ್ದೇಶ ಹಾಗೂ ಗುರಿಗಳು ಜನತೆಗೆ ಬಹು ಉಪಯುಕ್ತವಾಗಿದ್ದಾಗ್ಯೂ, ಬಹುತೇಕ ಸಂದರ್ಭದಲ್ಲಿ ನಿಗದಿತ ಸಮಯದೊಳಗೆ ನಿರೀಕ್ಷಿತ ಗುರಿ ತಲುಪಲು ಕಷ್ಟವಾಗಿರುವುದನ್ನು ಹಲವಾರು ಕಾರ್ಯಕ್ರಮದಡಿ ಗಮನಿಸಲಾಗಿದೆ. ಕಾರ್ಯಕ್ರಮದ ಗುರಿ, ಉದ್ದೇಶ ಹಾಗೂ ಪ್ರಯೋಜನಗಳ ಬಗ್ಗೆ ಗ್ರಾಮೀಣ ಜನತೆಗೆ ಮನಮುಟ್ಟುವಂತೆ ತಿಳಿ ಹೇಳುವಲ್ಲಿ ಸರ್ಕಾರೇತರ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಬಹು ನಿರ್ಣಾಯಕ ಪಾತ್ರ ವಹಿಸುತ್ತದೆ. ಕಾರ್ಯಕ್ರಮದ ಪ್ರಯೋಜನ ಜನತೆಗೆ ತಲುಪಿಸುವಲ್ಲಿ ಅದರಲ್ಲೂ ರೈತರಿಗೆ ತಲುಪಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಪ್ರಯೋಜನಕಾರಿಯೆನಿಸಿದೆ.

ಸ್ವಯಂ ಸೇವಾ ಸಂಸ್ಥೆಗಳ ಆಯ್ಕೆ:

ಇದನ್ನರಿತ ಕಾರ್ಯಪಡೆ ರಾಜ್ಯದ ಎಲ್ಲಾ ನಾಲ್ಕು ಪ್ರಾಂತ್ಯಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳಿಗೆ ಜೈವಿಕ ಇಂಧನ ಕುರಿತು ಕಾರ್ಯಾಗಾರ ಆಯೋಜಿಸಿ ಜೈವಿಕ ಇಂಧನ ಕುರಿತು ಸಮಗ್ರ ಮಾಹಿತಿ ನೀಡಿ, ಅವರುಗಳಿಂದ ರೈತರ ಮನವೊಲಿಕೆಗೆ ಸಿದ್ಧಗೊಳಿಸಲಾಯಿತು. ರಾಜ್ಯಾದ್ಯಂತ ೪೫೦ ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿ ನೀಡುವುದರೊಂದಿಗೆ ಗ್ರಾಮೀಣ ಪ್ರದೇಶದ ಜನತೆಗೆ ಜೈವಿಕ ಇಂಧನ ಕುರಿತು ಕರಪತ್ರ, ಭಿತ್ತಿ ಪತ್ರಗಳ ಮೂಲಕ ಆರಂಭಿಕ ಮಾಹಿತಿ ನೀಡಲು ಪ್ರಾರಂಭಿಸಲಾಯಿತು. ನಂತರ ಸ್ವಯಂ ಸೇವಾ ಸಂಸ್ಥೆಗಳಿಗೆ ಕಾರ್ಯಕ್ರಮ ಅನುಷ್ಠಾನದಲ್ಲಿ ಇನ್ನೂ ಅಧಿಕ ಜವಾಬ್ದಾರಿ ನೀಡಲು ತೀರ್ಮಾನಿಸಲಾಯಿತು. ಪ್ರಯುಕ್ತ ಮಂಡಳಿಯಿಂದ ಕಾರ್ಯಕ್ರಮ ಅನುಷ್ಠಾನಗೊಳಿಸುವ ಪ್ರಕ್ರಿಯೆಯಲ್ಲಿ ಸಮುದಾಯವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ಲೀಡ್ ಸ್ವಯಂ ಸೇವಾ ಸಂಸ್ಥೆಯನ್ನು ಆಯ್ಕೆ ಮಾಡಲು ನಿರ್ಧರಿಸಿತು. ಈ ಕುರಿತು ರಾಜ್ಯಾದ್ಯಂತ ಪ್ರಚಾರ ನೀಡುವ ಮೂಲಕ ಆಸಕ್ತ ಸಂಸ್ಥೆಗಳಿಂದ ಅರ್ಜಿ ಪಡೆದು ಹಲವು ಮಾನದಂಡಗಳನ್ನು ಅಳವಡಿಸುವ ಮೂಲಕ ಪಾರದರ್ಶಕವಾಗಿ ಒಟ್ಟು ೩೨ ಲೀಡ್ ಸ್ವಯಂ ಸೇವಾ ಸಂಸ್ಥೆಗಳನ್ನು ಮಂಡಳಿ ಆಯ್ಕೆ ಮಾಡಿತು.

ಈ ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಒಡಂಬಡಿಕೆಯನ್ನು ಮಾಡಿಕೊಡುವ ಮೂಲಕ ಕಾರ್ಯಕ್ರಮದ ಅನುಷ್ಠಾನದಲ್ಲಿ ಜವಾಬ್ದಾರಿಯುತ ಪಾತ್ರ ನಿರ್ವಹಿಸಲು ಅನುವು ಮಾಡಿಕೊಡಲಾಯಿತು.

P-13

ಗ್ರಾಮ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಆಯ್ಕೆ:

ಜಿಲ್ಲಾ ಲೀಡ್ ಸ್ವಯಂ ಸೇವಾ ಸಂಸ್ಥೆಗಳನ್ನು ಮಂಡಳಿಯಿಂದ ಆಯ್ಕೆ ಮಾಡುವುದರೊಂದಿಗೆ ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಸ್ವಯಂ ಸೇವಾ ಸಂಸ್ಥೆಗಳ ಆಯ್ಕೆಗಾಗಿ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್‌ಗಳಿಗೆ ಸೂಚಿಸಲಾಯಿತು. ಜಿಲ್ಲಾ ಪಚಾಯತ್‌ಗಳು ಜಿಲ್ಲಾ ಜೈವಿಕ ಇಂದನ ಉಸ್ತುವಾರಿ ಸಮಿತಿಗಳ ಮೂಲಕ ಗ್ರಾಮ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

P-14

ಈಗಾಗಲೇ ಬಿಜಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ೪೬ ಗ್ರಾಮ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ, ಹಸಿರು ಹೊನ್ನು, ಬರಡು ಬಂಗಾರ ಹಾಗೂ ಇತರ ಜೈವಿಕ ಇಂಧನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ವಯಂ ಸೇವಾ ಸಂಸ್ಥೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಅತಿ ಕಡಿಮೆ ಸಮಯದಲ್ಲಿ ಕಾರ್ಯಕ್ರಮದ ಯಶಸ್ವೀ ಅನುಷ್ಠಾನಕ್ಕೆ ಸಾಧ್ಯ ವಾಗುವುದೆಂದು ಮಂಡಳಿಗೆ ಅನುಭವವಾಗಿದೆ. ಮಂಡಳಿಯ ಈ ಭಾವನೆ ೨೦೧೨-೧೩ನೇ ಸಾಲಿನ ಸುವರ್ಣ ಭೂಮಿ ಯೋಜನೆಯ ಅನುಷ್ಠಾನದಲ್ಲಿ ರೈತರಿಂದ ಗುರಿ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ರುಜುವಾಗಿದೆ.

P-15

ಮಂಡಳಿಯಿಂದ ಆಯ್ಕೆ ಮಾಡಿದ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಕೆಲವೊಂದು ಸಂಸ್ಥೆಗಳು ನುರಿತ ಸಿಬ್ಬಂದಿಗಳ ಕೊರತೆಯಿಂದ, ಮೂಲ ಭೂತ ಸೌಕರ್ಯಗಳ ಕೊರತೆಯಿಂದ ಹಾಗೂ ಸಮನ್ವಯ ಕೊರತೆಯಿಂದ ಕಾರ್ಯಕ್ರಮ ಅನುಷ್ಠಾನದಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿರುವುದಿಲ್ಲ. ಈ ಪ್ರಯುಕ್ತ ಕೆಲವೊಂದು ಜಿಲ್ಲೆಗಳಲ್ಲಿ ಕಾರ್ಯಕ್ರಮದ ಅನುಷ್ಠಾನ ಕುಂಠಿತಗೊಂಡಿದೆ. ಇಂತಹ ಸಂಸ್ಥೆಗಳನ್ನು ಪ್ರೇರೇಪಿಸಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಂಡಳಿ ಮಾಡಬೇಕಿದೆ.