Bio Energy Karnataka > ನಮ್ಮ ಬಗ್ಗೆ

ನಮ್ಮ ಬಗ್ಗೆ

ಭಾರತ ದೇಶವು, ಸಾಂಪ್ರದಾಯಿಕ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಇತ್ಯಾದಿಗಳನ್ನು ಅತೀ ಹೆಚ್ಚು ಉಪಯೋಗಿಸುವ ದೇಶಗಳಲ್ಲಿ ಒಂದಾಗಿದೆ. ದೇಶದಲ್ಲಿನ ಒಟ್ಟು ಬೇಡಿಕೆಯ ಶೇ 85 ರಷ್ಟು ತೈಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ದೇಶದ ವಿದೇಶಿ ವಿನಿಮಯ ಹೆಚ್ಚಿನ ಪ್ರಮಾಣದಲ್ಲಿ ವ್ಯಯವಾಗುತ್ತಿದೆ. ಇದರಿಂದ ದೇಶದ ಆರ್ಥಿಕ ಪ್ರಗತಿ ಕುಂಟಿತಗೊಳ್ಳುತ್ತಿದೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಮಾರಕವಾಗುತ್ತಿದೆ. ದೇಶದಲ್ಲಿ ಪೆಟ್ರೋಲಿಯಂ ಇಂಧನದ ಇತರೆ ಮೂಲಗಳ ಲಭ್ಯತೆ ಮತ್ತು ಪತ್ತೆ ಹಚ್ಚುವ ಕಾರ್ಯ ಅತ್ಯಂತ ಕ್ಷೀಣ ಅಥವಾ ದುಬಾರಿಯಾಗಿದೆ. ಈ ನಿಟ್ಟಿನಲ್ಲಿ ಪೆಟ್ರೋಲಿಯಂ ಮೂಲದ ಸಾಂಪ್ರದಾಯಿಕ ಇಂಧನಗಳ ಬದಲಿಗೆ ಜೈವಿಕ ಇಂಧನಗಳು ಆಶಾಕಿರಣವಾಗಿವೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ನೆಡೆಸಿದ ಅಧ್ಯಯನ, ವಿಶ್ಲೇಷಣೆ ಮತ್ತು ಸಾಧಕ-ಬಾಧಕಗಳ ವರದಿಗಳ ಆಧಾರದ ಮೇಲೆ ಕರ್ನಾಟಕ ರಾಜ್ಯಸರ್ಕಾರ ದಿನಾಂಕ 01-03-2019 ರಿಂದಲೇ ಅಧಿಕೃತವಾಗಿ ಜಾರಿಗೊಳ್ಳುವಂತೆ, ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿಯನ್ನು ಜಾರಿಗೊಳಿಸಿದೆ ಮತ್ತು ದಿನಾಂಕ 06.12.2010 ಅಭಿವೃದ್ಧಿಮಂಡಳಿಯ ಸ್ಥಾಪನೆಯನ್ನು ಕರ್ನಾಟಕ ರಾಜ್ಯಪಥದ ಮೂಲಕ ಉದ್ಘೋಷಿಸಿ ಪ್ರಕಟಿಸಿದೆ. ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿಸಲಾದ ಈ ಮಂಡಳಿಯು ಸರ್ಕಾರದ ಅಪರಮುಖ್ಯಕಾರ್ಯದರ್ಶಿ/ಅಭಿವೃದ್ಧಿ ಆಯುಕ್ತರ ನೇತೃತ್ವದ ಕಾರ್ಯಕಾರಿಸಮಿತಿಯನ್ನು ಹೊಂದಿರುತ್ತದೆ ಮತ್ತು ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಒಬ್ಬ ಹಿರಿಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹೊಂದಿದೆ.

ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜೈವಿಕ ಇಂಧನಗಳ ಅಭಿವೃದ್ಧಿ ಕುರಿತಂತೆ ಅತ್ಯಂತ ಶ್ರದ್ಧೆಯಿಂದ ಹಲವಾರು ವರ್ಷಗಳಿಂದ ಶ್ರಮವಹಿಸಿ ದುಡಿದ ಸಮಗ್ರ ವಿಕಾಸ ಸಂಸ್ಥೆಯ ಮುಖ್ಯಸ್ಥರಾಗಿದ್ದ ಶ್ರೀ ವೈ. ಬಿ. ರಾಮಕೃಷ್ಣ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ ಮತ್ತು ಹಿರಿಯ ದಕ್ಷ IAS ಅಧಿಕಾರಿ ಶ್ರೀಎ.ಕೆ. ಮೊನ್ನಪ್ಪ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅಧಿಕೃತವಾಗಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯಪ್ರವೃತ್ತವಾಗಿದೆ.