Bio Energy Karnataka > ನಮ್ಮ ಬಗ್ಗೆ > ಹುಟ್ಟು, ಶಿಫಾರಸ್ಸುಗಳು ಮತ್ತು ವಿಕಾಸ

ಹುಟ್ಟು, ಶಿಫಾರಸ್ಸುಗಳು ಮತ್ತು ವಿಕಾಸ

ಮೊದಲ ಹೆಜ್ಜೆ: ಜೈವಿಕ ಇಂಧನ ಕಾರ್ಯಪಡೆ  ರಚನೆ

ಕರ್ನಾಟಕ ರಾಜ್ಯದ ಸುವರ್ಣ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರದ ಹಿಂದಿನ ರಾಷ್ಟ್ರಪತಿಗಳಾದ ಮಾನ್ಯ ಡಾ: ಎ.ಪಿ.ಜೆ.ಅಬ್ದುಲ್ ಕಲಾಂ ಅವರು ವಿಧಾನ ಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದ ಅಭಿವೃದ್ಧಿಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದರು. ಈ ಸಲಹೆಗಳ ಪೈಕಿ ಜೈವಿಕ ಇಂಧನದ ಅಭಿವೃದ್ಧಿಯೂ ಒಂದಾಗಿತ್ತು.ಜೈವಿಕ ಇಂಧನದ ಮಹತ್ವವನ್ನು ಅರಿತ ರಾಜ್ಯ ಸರ್ಕಾರ 12 ನೇ ಸೆಪ್ಟೆಂಬರ್, 2008 ರಂದು ಶ್ರೀ.ವೈ.ಬಿ.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳ ಹಿನ್ನೆಲೆ ಹೊಂದಿದ ತಜ್ಞರ ತಂಡದೊಂದಿಗೆ ಜೈವಿಕ ಇಂಧನ ಕಾರ್ಯಪಡೆಯನ್ನು ರಚಿಸಿತು.ಜೈವಿಕ ಇಂಧನ ಕಾರ್ಯಪಡೆ ಕೆಳಗಿನ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಿದೆ.

ಸದಸ್ಯರ ಹೆಸರು ಹುದ್ದೆ
ಶ್ರೀ. ವೈ. ಬಿ. ರಾಮಕೃಷ್ಣ, ಸಮಗ್ರ ವಿಕಾಸ, ಬೆಂಗಳೂರು. ಅಧ್ಯಕ್ಷರು
ಪ್ರೋ. ಬಾಲಕೃಷ್ಣೇಗೌಡ, ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು ಸದಸ್ಯರು
ಪ್ರೊ. ಉಡುಪಿ ಶ್ರೀನಿವಾಸ, IISc, ಬೆಂಗಳೂರು. ಸದಸ್ಯರು
ಶ್ರೀ. ಜೆ. ಟಿ. ರಾಜಶೇಖರ್ ಸದಸ್ಯರು
ಡಾ.ಜಿ. ಎನ್. ಎಸ್. ರೆಡ್ಡಿ, BAIF, ತಿಪಟೂರು. ಸದಸ್ಯರು
ಪ್ರೋ. ಎಸ್. ಜೆ. ಪಾಟೀಲ್, ಕೃಷಿ ವಿಶ್ವವಿದ್ಯಾಲಯ, ಧಾರವಾಡ. ಸದಸ್ಯರು
ಶ್ರೀ. ಅತ್ತಿಹಳ್ಳಿ ದೇವರಾಜ್, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು. ಸದಸ್ಯರು
ಶ್ರೀ. ಕ್ರಿಷನ್ (Malavalli Power) ಸದಸ್ಯರು
ಅಧಿಕಾರಿ ಸದಸ್ಯರು ಸದಸ್ಯರು
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.
ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ ಸದಸ್ಯರು
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ಸದಸ್ಯರು
ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು. ಸದಸ್ಯರು
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ ಸದಸ್ಯರು
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ. ಸದಸ್ಯರು
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು. ಸಂಚಾಲಕರು

ಈ ಕಾರ್ಯಪಡೆಯು ಒಟ್ಟು ಹದಿನೈದು ಸಭೆಗಳನ್ನು ನಡೆಸಿ, ರಾಜ್ಯಾದ್ಯಂತ ಜೈವಿಕ ಇಂಧನದ ಅಭಿವೃದ್ಧಿ, ಜೈವಿಕ ಇಂಧನ ನೀತಿಯ ನಿರ್ಣಯ, ನೆಡುತೋಪು ಕಾಮಗಾರಿಗಳು, ಜೈವಿಕ ಇಂಧನ ಮಂಡಳಿಯ ರಚನೆ, ಗ್ರಾಮ ಅರಣ್ಯ ಸಮಿತಿಗಳ ರಚನೆ, ಜೈವಿಕ ಇಂಧನದಲ್ಲಿ ಹೊಸ ಉಪಕ್ರಮ ಶಕ್ತಿಗಳು (initiatives) , ಸಾರಿಗೆ ವಿಭಾಗದಲ್ಲಿ ಇಥೆನಾಲ್ ಮಿಶ್ರಿತ ಡೀಸೆಲ್‌ನ ಅಪ್ರತಿಮ ಪ್ರಯೋಗ, ಇಥೆನಾಲ್ ಮಿಶ್ರಿತ ಪೆಟ್ರೋಲ್‌ನ ಮಿಶ್ರಣವನ್ನು ಶೇ. 5 ರಿಂದ 10 ಉಪಯೋಗಗಳನ್ನು ಸಮಾಜದ ಎಲ್ಲಾ ವರ್ಗದ ಜನತೆಗೆ ಮನವರಿಕೆ ಮಾಡುವ ದಿಕ್ಕಿನಲ್ಲಿ ಬಿರುಸಿನ ಪ್ರಚಾರ, ಸರ್ಕಾರಿ ಹಾಗೂ ಅರೆ ಸರ್ಕಾರಿ ಇಲಾಖೆಗಳ ನಿಕಟ ಸಂಪರ್ಕದಿಂದ ಹೊಸ ಯೋಜನೆಗಳ ಅನುಷ್ಠಾನ, ಕೃಷಿ ಇಲಾಖೆಯ ವ್ಯಾಪ್ತಿಗೊಳಪಡುವ ಮಡೇನೂರು (ಹಾಸನ) ಜೈವಿಕ ಇಂಧನ ಉದ್ಯಾನವನದ ಅಭಿವೃದ್ಧಿ, ಭೂಮಿ ಗುರುತಿಸುವಿಕೆ ಹಾಗೂ ಬಳಕೆ, ಬೀಜ ಸಂಗ್ರಹಣೆ ಮತ್ತು ಸಂಸ್ಕರಣೆ, ಉತ್ತಮ ತಳಿಯ ಸಸಿಗಳ ಅಭಿವೃದ್ಧಿ ಹಾಗೂ ಬೀಜೋತ್ಪಾದನೆ ಇವು ಕಾರ್ಯಪಡೆಯ ಪ್ರಮುಖ ಕಾರ್ಯಕ್ರಮಗಳಾಗಿದ್ದವು. ವಿವಿಧ ವಿಶ್ವ ವಿದ್ಯಾಲಯಗಳು, ತಾಂತ್ರಿಕ ವಿದ್ಯಾ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಮಾಡುವ ನಿಟ್ಟಿನಲ್ಲಿ ಕಾರ್ಯಪಡೆಯ ಶ್ರಮದ ಹೆಗ್ಗುರುತಾಗಿ ರಾಜ್ಯ ಜೈವಿಕ ಇಂಧನ ನೀತಿ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ 12.09.2008 ರಂದು ಜಾರಿಗೆ ತಂದಿತು. ಇಂಧನ ನೀತಿಯ ಉದ್ದೇಶಗಳನ್ನು ಹಾಗೂ ಕಾರ್ಯಪಡೆಯ ಶಿಫಾರಸ್ಸುಗಳನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 06.12.2010 ರಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ಕಾರ್ಯಪ್ರವೃತ್ತವಾಗಿದೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆಯ ಪ್ರಮುಖ ಶಿಫಾರಸ್ಸುಗಳುಭೂಮಿ ಗುರುತಿಸುವಿಕೆ ಹಾಗೂ ಬಳಕೆ

1. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೈವಿಕ ಇಂಧನ ನೀತಿಯಲ್ಲಿ ಕೃಷಿಯೇತರ ಭೂಬಳಕೆಗಾಗಿ ಒತ್ತು ನೀಡಿದೆ. ವಿವಿಧ ಮೂಲಗಳ ಪ್ರಕಾರ ರಾಜ್ಯದಲ್ಲಿ 13.5 ಲಕ್ಷ ಹೆಕ್ಟೇರ್ ಬಂಜರು ಭೂಮಿ ಇರುವುದಾಗಿ ತಿಳಿದಿದೆ. ಜೈವಿಕ ಇಂಧನದ “ಬರಡು ಬಂಗಾರ” ಕಾರ್ಯಕ್ರಮಕ್ಕಾಗಿ ಎಷ್ಟು ಪ್ರಮಾಣದ ಇಂತಹ ಭೂಮಿ ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ಲಭ್ಯವಿದೆ ಎಂದು ಗುರುತಿಸುವುದಕ್ಕೆ ಪ್ರಾಶಸ್ಥ್ಯ ನೀಡಬೇಕು. ಆಯಾ ಜಿಲ್ಲಾಡಳಿತಗಳು ಈ ಕಾರ್ಯ ಕೂಡಲೇ ಕೈಗೊಳ್ಳಬೇಕು. ಇದಕ್ಕೆ ಇ-ಆಡಳಿತ ಇಲಾಖೆಯಲ್ಲಿ  ಲಭ್ಯವಿರುವ ಮಾಹಿತಿ  ಪಡೆಯಬೇಕು.

2. ರಾಜ್ಯದ ಅರಣ್ಯ ಇಲಾಖೆಯ ಸುಪರ್ದಿನಲ್ಲಿ ಬಹಳಷ್ಟು ಭೂಪ್ರದೇಶವಿದೆ. ಈ ಎಲ್ಲಾ ಕಡೆಗಳಲ್ಲಿ ದಟ್ಟವಾದ ಅರಣ್ಯ ಪ್ರದೇಶವಿರುವುದಿಲ್ಲ. ಶೇ. 0.3 ಗಿಂತಲೂ ಕಡಿಮೆ ಅರಣ್ಯ ಪ್ರದೇಶವಿರುವಂತಹ ಇಂತಹ ಭೂಪ್ರದೇಶ ಪತ್ತೆ ಹಚ್ಚಿ, ಆ ಜಾಗಗಳಲ್ಲಿ ಜೈವಿಕ ಇಂಧನ ಸಸಿ ನೆಡುವ ಕಾರ್ಯಕೈಗೊಳ್ಳಬೇಕು.

3. ಯಾವುದೇ ಬೆಳೆ ಬೆಳೆಯದಿರುವ ಬಹಳಷ್ಟು ಜೌಗು ಭೂಪ್ರದೇಶವು ರೈತರ ಸುಪರ್ದಿನಲ್ಲಿದ್ದು, ಈ ಭೂಮಿಯಲ್ಲಿ ಜೈವಿಕ ಇಂಧನ ಮರ ಬೆಳೆಸಲು ಸೂಕ್ತವಾಗಿದೆ. ಇಂತಹ ಜಮೀನಿನ ಒಡೆತನವಿರುವ ರೈತರ ವಿವರ, ಸರ್ವೆ ನಂಬರ್, ಜಮೀನಿನ ವಿಸ್ತೀರ್ಣ ಇತ್ಯಾದಿ ಮಾಹಿತಿ ಗ್ರಾಮ ಪಂಚಾಯತ್‌ವಾರು ಸಿದ್ಧಪಡಿಸಲು ಪ್ರಯತ್ನಿಸಬೇಕು.

4. ಪಶು ಸಂಗೋಪನೆ, ತೋಟಗಾರಿಕೆ, ಸಣ್ಣ ಮತ್ತು ಬೃಹತ್ ನಿರಾವರಿ ಇಲಾಖೆ ಇತ್ಯಾದಿಗಳಂತಹ ಸರ್ಕಾರಿ ಇಲಾಖೆಗಳಲ್ಲಿ, ವಿಶ್ವವಿದ್ಯಾಲಯ, ಕೈಗಾರಿಕಾ ಪ್ರದೇಶ, ಶಾಲಾ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ರಕ್ಷಣಾ ಪಡೆಗಳಂತಹ ಸಂಸ್ಥೆಗಳಲ್ಲಿ ಅಧಿಕ ಪ್ರಮಾಣದ ಭೂಮಿ ಲಭ್ಯವಿದ್ದು, ಇದನ್ನು ಬಳಸಿಕೊಳ್ಳಲು ಉತ್ತೇಜನ ನೀಡಬೇಕು ಇಂತಹ ಭೂಮಿ ಪತ್ತೆ ಹಚ್ಚಬೇಕು.

5. ಗುತ್ತಿಗೆ ಆಧಾರದ ಮೇಲೆ ಕೃಷಿಯೇತರ ಜಮೀನಿನಲ್ಲಿ ಜೈವಿಕ ಇಂಧನ ಬೆಳೆ ಬೆಳೆಸಲು ಖಾಸಗಿ ವಲಯವನ್ನು ಉತ್ತೇಜಿಸಬೇಕು. ಜೌಗು ಭೂಮಿ ಹಾಗೂ ಬಂಜರು ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿ ಹಿಡಿತನಕ್ಕೆ ನೀಡಿ, ಬಂಡವಾಳ ತೊಡಗಿಸುವುದನ್ನು ಉತ್ತೇಜಿಸಲು ಅಗತ್ಯವಿರುವ ಕಂದಾಯ ಮಸೂದೆಯನ್ನು ಪುನರ್ ಪರಿಶೀಲಿಸಬೇಕು.

6. ರಾಜ್ಯದಲ್ಲಿ ಖಾಸಗಿ ಕಂಪನಿಗಳು ಜೈವಿಕ ಇಂಧನ ಬೀಜ ಬೆಳೆಯಲು ರೈತರೊಂದಿಗೆ ಮಾಡಿಕೊಳ್ಳಲಾಗುವ ಕರಾರು ಒಪ್ಪಂದದಲ್ಲಿ ಕರ್ನಾಟಕ ರೈತರ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅನುಮೋದನೆ ಪಡೆಯುವುದನ್ನು ಕಡ್ಡಾಯ ಮಾಡಬೇಕು.ಉತ್ತಮ ತಳಿಯ ಸಸಿಗಳ ಅಭಿವೃದ್ಧಿ ಹಾಗೂ ಬೀಜೋತ್ಪಾದನೆ.

7. ರಾಜ್ಯಾದ್ಯಂತ ವಿವಿಧ ಜೈವಿಕ ಇಂಧನ ತಾಯಿ ಮರಗಳನ್ನು ಗುರುತಿಸುವ ಹಾಗೂ ವಿವಿಧ ಪ್ರಾಂತ್ಯಗಳಲ್ಲಿ ಕ್ಲೋನಲ್ ಆರ್ಚರ್ಡಗಳ ನಿರ್ಮಾಣವನ್ನು ಅರಣ್ಯ ಇಲಾಖೆ ಹಾಗೂ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಹಾಸನದ ಜೈವಿಕ ಇಂಧನ ಉದ್ಯಾನದಲ್ಲಿ ಕೈಗೊಳ್ಳಲಾಗುತ್ತಿದೆ. (ಈ ಸಂಬಂಧ ಉಪ ಸಮಿತಿ ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿದೆ.)

8. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಕೃಷಿ ವಿಶ್ವವಿದ್ಯಾಲಯಗಳು, ಅರಣ್ಯ, ತೋಟಗಾರಿಕೆ ಹಾಗೂ ಜಲಾನಯನ ಮತ್ತು ಇತರ ಇಲಾಖೆಗಳ ಸಸ್ಯ ಕ್ಷೇತ್ರಗಳಲ್ಲಿ “ಹಸಿರು ಹೊನ್ನು” ಮತ್ತು “ಬರಡು ಬಂಗಾರ” ಕಾರ್ಯಕ್ರಮಕ್ಕಾಗಿ ಅಗತ್ಯವಿರುವ ಜೈವಿಕ ಇಂಧನ ಸಸಿ ಬೆಳೆಸಬೇಕು.

9. ಆಹಾರ ಬೆಳೆ ಬೆಳೆಯುವ ಜಮೀನಿನಲ್ಲಿ ಅಲ್ಪಾವಧಿ ಜೈವಿಕ ಇಂಧನ ಬೆಳೆಗಳಾದ ಹರಳು, ಪುಂಡಿಯಂತಹ ಬೆಳೆಗಳನ್ನು ರೈತರ ಜಮೀನಿನ ಬದು, ಬೇಲಿಗುಂಟ ಹಾಗೂ ಮಿಶ್ರ ಬೆಳೆಯಾಗಿ ಬೆಳೆಯಲು ಉತ್ತಮ ಬೀಜಗಳನ್ನು ರೈತರಿಗೆ ಸಹಾಯಧನದಲ್ಲಿ ನೀಡುವಂತೆ ಹಾಗೂ ಅವರಲ್ಲಿ ತಿಳುವಳಿಕೆ ಮೂಡಿಸಲು ಕೃಷಿ ಇಲಾಖೆಗೆ ನಿರ್ದೇಶನ ನೀಡಬೇಕು.

10. “ಹಸಿರು ಹೊನ್ನು” ಕೈಪಿಡಿಯಲ್ಲಿ ಸೂಚಿಸಿದಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಅಧಿಕಾರಿಗಳ, ರೈತರ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ, ವಿದ್ಯಾ ಸಂಸ್ಥೆಗಳ, ಗ್ರಾಮ ಅರಣ್ಯ ಸಮಿತಿ ಇತ್ಯಾದಿಗಳ ಪ್ರತಿನಿಧಿಯನ್ನೊಳಗೊಂಡ ಸಮಿತಿಯನ್ನು ಜೈವಿಕ ಇಂಧನ ಕಾರ್ಯಕ್ರಮಗಳಾದ “ಹಸಿರು ಹೊನ್ನು”, “ಬರಡು ಬಂಗಾರ”ಗಳ ಯೋಜನೆ ರೂಪಿಸಲು ಹಾಗೂ ಅನುಷ್ಠಾನಗೊಳಿಸಲು, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ನಿರ್ಮಾಣ ಮಾಡಲು ಹಾಗೂ ಬೀಜೋತ್ಪಾದನೆಗೆ ಅಗತ್ಯವಿರುವ ಎಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಚಿಸಬೇಕು.

11. ಸಮುದಾಯವನ್ನು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ತೊಡಗಿಸುವ ಮೂಲಕ ಮಾತ್ರ “ಹಸಿರು ಹೊನ್ನು”, “ಬರಡು ಬಂಗಾರ”ದಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ. ಗ್ರಾಮ ಅರಣ್ಯ ಸಮಿತಿ, ಮಹಿಳಾ ಸ್ವಸಹಾಯ ಗುಂಪುಗಳು, ಕೆರೆ ಬಳಕೆದಾರರ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳನ್ನು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. “ಹಸಿರು ಹೊನ್ನು” ಕೈಪಿಡಿಯಲ್ಲಿ ಈ ಸಂಬಂಧ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಿದೆ.

ಬೀಜ ಸಂಗ್ರಹಣೆ ಮತ್ತು ಸಂಸ್ಕರಣೆ

12. ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳ ಜೊತೆಗೆ ಹೋಬಳಿ ಮಟ್ಟದಲ್ಲಿ ಪ್ರತಿ ರೈತರ ಸಂಪರ್ಕ ಕೇಂದ್ರಗಳಲ್ಲಿ ಸರ್ಕಾರದಿಂದ ನಿಗದಿಪಡಿಸಿದ ಕನಿಷ್ಠ ಬೆಲೆಗೆ ಜೈವಿಕ ಇಂಧನ ಬೀಜ ಖರೀದಿ ಮಾಡುವುದು, ಬೀಜ ಸಂಗ್ರಹಣೆ ಮಾಡಿ, ಸಂಸ್ಕರಣೆ ಮಾಡುವುದು ಅಥವಾ ಇತರ ಸಂಸ್ಕರಣಾ ಘಟಕಗಳಿಗೆ ಸರಬರಾಜು ಮಾಡುವುದು. (ಕಾರ್ಯಪಡೆ ವಿವರವಾಗಿ ಪ್ರತ್ಯೇಕ ವರದಿ ಸಲ್ಲಿಸಿದೆ.)

13. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳಲ್ಲದೆ,  ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ವಿಶ್ವವಿದ್ಯಾಲಯ  ಧಾರವಾಡ, ಜೈವಿಕ ಇಂಧನ ಉದ್ಯಾನ ಹಾಸನ ಹಾಗೂ ಎಂ.ಜಿ.ಐ.ಆರ್.ಇ.ಡಿ. ಸಂಸ್ಥೆ ಬೆಂಗಳೂರು ಕೇಂದ್ರಗಳಲ್ಲದೆ, ಇನ್ನೂ 4 ಸ್ಥಳಗಳಲ್ಲಿ ಇಂತಹ ಕೇಂದ್ರಗಳನ್ನು ಕಾರ್ಯಪಡೆ ನಿರ್ಮಿಸಿದೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಗೆ ಕನಿಷ್ಠ ಒಂದರಂತೆ ಇನ್ನೂ 8 ಸ್ಥಳಗಳಲ್ಲಿ ಇಂತಹ ಕೇಂದ್ರಗಳನ್ನು ನಿರ್ಮಿಸಲಾಗುವುದು. ಈ ಕೇಂದ್ರಗಳು ಬಹಳ ಮಹತ್ವದಾಗಿದ್ದು, ಜೈವಿಕ ಇಂಧನ ಕ್ಷೇತ್ರದ ಪ್ರಾರಂಭದಿಂದ ಅಂತ್ಯದವರೆಗಿನ ಕಾರ್ಯಕೈಗೊಳ್ಳಲು ಸಾಧ್ಯವಾಗುತ್ತದೆ. (ಈ ಕೇಂದ್ರಗಳನ್ನು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಉಪ ಸಮಿತಿ ಪ್ರತ್ಯೇಕವಾಗಿ ಮಧ್ಯಂತರ ವರದಿ ನೀಡಿದೆ.)

14. ಬೀಜೋತ್ಪಾದನೆ ಹೆಚ್ಚಿದಂತೆಲ್ಲಾ ಖಾಸಗಿ ಒಡೆತನದಲ್ಲಿ ಅಥವಾ ಮಂಡಳಿಯಿಂದ ಜೈವಿಕ ಡೀಸೆಲ್ ಉತ್ಪಾದನೆ ಕೇಂದ್ರಗಳನ್ನು ನಿರ್ಮಿಸಬೇಕಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಉತ್ಪಾದಿಸುವ ಬೀಜಗಳ ಲಭ್ಯತೆಯ ಮೇಲೆ ನಿಗಾ ಇಡಲು ಹಾಗೂ ಸಂಗ್ರಹಿಸಿದ ಬೀಜಗಳನ್ನು ಸಂಸ್ಕರಣಾ ಘಟಕಕ್ಕೆ ತಲುಪಿಸಿ ಕನಿಷ್ಠ ಕಾರ್ಬನ್ ಫುಟ್ ಪ್ರಿಂಟನ್ನು ಖಾತರಿ ಪಡಿಸಿಕೊಳ್ಳುವ ವ್ಯವಸ್ಥೆ ನಿರ್ಮಾಣ ಮಾಡಬೇಕು.

15. ಈಗಾಗಲೇ ನಿರ್ಮಿಸಿದ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳಲ್ಲಿ ಉತ್ಪಾದಿಸುವ ಜೈವಿಕ ಡೀಸೆಲ್‌ನ ಗುಣಮಟ್ಟ ಪರೀಕ್ಷೆ ಮಾಡುವ ಕನಿಷ್ಠ ಸೌಲಭ್ಯಗಳಿವೆ. ರಾಜ್ಯ ಮಟ್ಟದಲ್ಲಿ ಬೆಂಗಳೂರಿನಲ್ಲಿ ಜೈವಿಕ ಇಂಧನ ಗುಣಮಟ್ಟ ಖಾತರಿಪಡಿಸುವ ಉತ್ತಮ ಪ್ರಯೋಗ ಶಾಲೆಯನ್ನು ರಾಜ್ಯದ ಜನತೆಗಾಗಿ ಹಾಗೂ ಹೊರ ರಾಜ್ಯದವರಿಗಾಗಿ ನಿರ್ಮಿಸುವುದು ಅಗತ್ಯವಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇದಕ್ಕೆ ಅಗತ್ಯವಿರುವ ಸ್ಥಳ ಒದಗಿಸಲು ವಿಶ್ವವಿದ್ಯಾಲಯದ ಉಪ ಕುಲಪತಿ ಒಪ್ಪಿದ್ದಾರೆ.

ನೈಪುಣ್ಯತೆ ಕೇಂದ್ರ ಹಾಗೂ ಸಂಶೋಧನಾ ಚಟುವಟಿಕೆ.

16. ಜೈವಿಕ ಇಂಧನ ಮೌಲ್ಯವರ್ಧನೆ ಸರಪಳಿಯಲ್ಲಿ ಹಿಂಡಿಯನ್ನು ಗೊಬ್ಬರವಾಗಿ, ಪಶು ಆಹಾರವಾಗಿ, ಜೈವಿಕ ಅನಿಲದ ಉತ್ಪಾದನೆಗಾಗಿ, ಜೈವಿಕ ಕೀಟ ನಿಯಂತ್ರಣಕ್ಕಾಗಿ, ಔಷಧಿಗಾಗಿ, ಗ್ಲಿಸರಿನ್ ಹಾಗೂ ಇತರ ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸುತ್ತದೆ. ಸಾರ್ವಜನಿಕ ಪ್ರಯೋಜನಕ್ಕಾಗಿ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ತಂತ್ರಜ್ಞಾನದ ಅಭಿವೃದ್ಧಿಗಾಗಿ ಅಗತ್ಯವಿರುವ ಅನುದಾನ ನೀಡಬೇಕು. (ಸಂಶೋಧನೆ ಅವಕಾಶಗಳಿಗೆ ಸಂಬಂಧಿಸಿದ ಪ್ರತ್ಯೇಕ ವರದಿ ಈಗಾಗಲೇ ಸಲ್ಲಿಸಿದೆ.)

17. ಜೈವಿಕ ಇಂಧನ ಸಂಶೋಧನೆ ಹಾಗೂ ವಿಸ್ತರಣೆ ಚಟುವಟಿಕೆಗಳನ್ನು ಈಗಾಗಲೇ ಹಾಸನದ ಜೈವಿಕ ಇಂಧನ ಉದ್ಯಾನದಿಂದ ಕೈಗೊಂಡಿರುವುದು ಉದಾಹರಣೆಯಾಗಿದೆ. ಉದ್ಯಾನವನ್ನು ನೈಪುಣ್ಯ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕು. ಪ್ರಸ್ತುತ ಜೈವಿಕ ಇಂಧನ ಉದ್ಯಾನ ಅನುದಾನದ ಕೊರತೆಯಿಂದ ಬಳಲುತ್ತಿದೆ. ಜೈವಿಕ ಇಂಧನ ಉದ್ಯಾನಕ್ಕೆ ಅಗತ್ಯವಿರುವ ಆಯವ್ಯಯ ಕಲ್ಪಿಸಬೇಕು ಹಾಗೂ ಇದನ್ನು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮೂಲಕ ನೀಡಬೇಕು. (ಉಪ ಸಮಿತಿಯ ಮಧ್ಯಂತರ ವರದಿಯನ್ನು ಸಲ್ಲಿಸಿದೆ.)

ಅನುದಾನ

18. ಸಸಿ ಬೆಳೆಸುವ ಚಟುವಟಿಕೆಗೆ ಪ್ರಮುಖವಾಗಿ ಎಂ.ಜಿ.ಎನ್.ಆರ್.ಇ.ಜಿ.ಎ., ಅನುದಾನ ಬಳಸಿಕೊಳ್ಳುವುದು. “ಹಸಿರು ಹೊನ್ನು” ಹಾಗು “ಬರಡು ಬಂಗಾರ” ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನಿಷ್ಠಾನಗೊಳಿಸಲು ಪ್ರಸ್ತುತ ಅನುದಾನ ಬಳಕೆಯಲ್ಲಿನ ತೊಡಕುಗಳನ್ನು ನಿವಾರಣೆ ಮಾಡಬೇಕು ಹಾಗೂ ಅರಣ್ಯ ಇಲಾಖೆಯನ್ನು ಅನುಷ್ಠಾನ ಇಲಾಖೆಯಾಗಿ ಗುರುತಿಸಬೇಕು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಕಾರ್ಯಕೈಗೊಂಡು ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚಿಸಬೇಕು.

19. ಕೇಂದ್ರ ಸರ್ಕಾರದ ಜೈವಿಕ ಇಂಧನ ನೀತಿ ಜಾರಿಗೊಂಡಿರುವುದರಿಂದ ಪುನರುತ್ಪಾದಿಸಲ್ಪಡುವ ಇಂಧನದ ಮಂತ್ರಾಲಯದಿಂದ ಅಧಿಕ ಅನುದಾನ ಲಭಿಸಲಿದೆ. ರಾಜ್ಯ ಸರ್ಕಾರ ಜೈವಿಕ ಇಂಧನ ಕಾರ್ಯಕ್ರಮದ ಪ್ರಚಾರಕ್ಕಾಗಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರದಿಂದ ಅನುದಾನ ಕೋರಬೇಕು.

20. ಪ್ರತಿಶತ 0.3 ಗಿಂತಲೂ ಕಡಿಮೆ ಸಾಂದ್ರತೆಯಿರುವ ಬಯಲು ಪ್ರದೇಶದಲಿರುವ ಅರಣ್ಯ ಪ್ರದೇಶದಲ್ಲಿ ಜೈವಿಕ ಇಂಧನ ಸಸಿ ನೆಡುವ ಕಾರ್ಯಕ್ಕಾಗಿ ಅರಣ್ಯ ಮತ್ತು ಪರಿಸರ ಇಲಾಖೆಯ ರಾಜ್ಯದ CAMPA ಅನುದಾನವನ್ನು ವರ್ಗೀಕರಿಸಿ ಒದಗಿಸಬೇಕು. “ಬರಡು ಬಂಗಾರ” ಕಾರ್ಯಕ್ರಮದ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುವ ಗ್ರಾಮ ಅರಣ್ಯ ಸಮಿತಿಗಳನ್ನು ಬಲಪಡಿಸಲು ಈ ಅನುದಾನ ಉಪಯೋಗಿಸಬೇಕು.

21. ರಾಜ್ಯದ 127 ಹಿಂದುಳಿದ ತಾಲ್ಲೂಕುಗಳಲ್ಲಿ ಜೈವಿಕ ಇಂಧನ ಮರ ಬೆಳೆಸುವುದರಿಂದ ಮುಂಬರುವ ದಿನಗಳಲ್ಲಿ ಬರದ ಭೀತಿ ತಡೆಗಟ್ಟುವಲ್ಲಿ ಸಾಧ್ಯವಾಗುತ್ತದೆ.  ಈ ತಾಲ್ಲೂಕುಗಳಲ್ಲಿ ಜೈವಿಕ ಇಂಧನ ಮರ ಬೆಳೆಸಲು ವಿಶೇಷ ಅಭಿವೃದ್ಧಿ ಅನುದಾನ ವರ್ಗೀಕರಿಸಿ (ವಿಂಗಡಿಸಿ) ಒದಗಿಸಬೇಕು.

22. ರಾಜ್ಯದ ಆಯವ್ಯಯದಲ್ಲಿ ಕೆಳಗಿನವುಗಳಿಗೆ ವಿಶೇಷ ಅನುದಾನ ಒದಗಿಸಬೇಕು.• ಜೈವಿಕ ಇಂಧನ ಸಸಿ ಬೆಳೆಸಲು.• ಪ್ರಾತ್ಯಕ್ಷಿಕೆ, ತರಬೇತಿ, ಕಾರ್ಯಾಗಾರ, ಪ್ರದರ್ಶನ, ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳು.• ಸಂಶೋಧನೆ ಚಟುವಟಿಕೆ.• ಸಹಾಯಧನ ಹಾಗೂ ತೆರಿಗೆ ಪೋತ್ಸಾಹಧನ ಹಾಗೂ ಇತರ ಪ್ರಚಾರ ಕಾರ್ಯಗಳಿಗಾಗಿ • ಸಹಾಯಧನ, ಪ್ರೋತ್ಸಾಹಧನ ಹಾಗೂ ತೆರಿಗೆಗಳು.

23. ಜೈವಿಕ ಇಂಧನ ಕ್ಷೇತ್ರಕ್ಕೆ ಬಳಕೆಯಾಗುವ ಖಾದ್ಯೇತರ ತೈಲ ಬೀಜಗಳ ವ್ಯಾಪಾರ ವಹಿವಾಟಿನ ಮೇಲೆ ವಿಧಿಸಲಾಗುವ ಎ.ಪಿ.ಎಂ.ಸಿ. ಸೆಸ್‌ನಿಂದ ವಿನಾಯಿತಿ ನೀಡುವುದು.

24. ರೈತ ಸಂಪರ್ಕ ಕೇಂದ್ರಗಳಿಂದ ಸ್ವೀಕರಿಸಲಾಗುವ ಜೈವಿಕ ಇಂಧನ ಬೀಜಗಳ ಮೇಲೆ ಪ್ರತಿ ಕಿಲೋ ಗ್ರಾಂ ಬೀಜಕ್ಕೆ ರೂ. 2.00/- ರಂತೆ ಕನಿಷ್ಠ ದರದ ಮೇಲೆ ಹೆಚ್ಚುವರಿಯಾಗಿ ರೈತರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಬೇಕು.

25. ಗೃಹ ಹಾಗೂ ಗ್ರಾಮೀಣ ಕೈಗಾರಿಕೆಗಳ ಸ್ಥಾಪನೆಗಾಗಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಜೈವಿಕ ಇಂಧನ ಉದ್ಯಾನ ಹಾಸನಗಳಿಂದ ಅಭಿವೃದ್ಧಿ ಪಡಿಸಲಾಗುವ ಎಣ್ಣೆ ತೆಗೆಯುವ ಉಪಕರಣ ಹಾಗೂ ಮೌಲ್ಯವರ್ಧಿತ ಇತರ ಉಪಕರಣಗಳಿಗೆ ಕೃಷಿ ಇಲಾಖೆಯಿಂದ ಸಹಾಯಧನ ನೀಡಲು ಪರಿಗಣಿಸಬೇಕು.

26. ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಘಟಕಗಳಿಗೆ 5 ವರ್ಷಗಳ ಆದಾಯ ತೆರಿಗೆ ವಿನಾಯಿತಿ ನೀಡಬೇಕು ಹಾಗೂ ಜೈವಿಕ ಇಂಧನ ಕೈಗಾರಿಕೆಗೆ ನಿಶುಲ್ಕ ನೀತಿ (Zero Taxation Policy) ಅನುಸರಿಸಲು ಕ್ರಮಕೈಗೊಳ್ಳುವುದು.

27. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿ.ಎಂ.ಟಿ.ಸಿ. ಹಾಗೂ ಇತರ ಬೃಹತ್ ಸಾರಿಗೆ ಸಂಸ್ಥೆಗಳ ಮಾಲಿಕರು ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಜೈವಿಕ ಇಂಧನ ಮಿಶ್ರಿತ ಇಂಧನವನ್ನು ಸಾರಿಗೆ ಕ್ಷೇತ್ರದಲ್ಲಿ ಉಪಯೋಗಿಸಲು ಅವರುಗಳಿಗೆ ಪ್ರೋತ್ಸಾಹಧನ ನೀಡಿ ಹುರಿದುಂಬಿಸುವುದರೊಂದಿಗೆ ಕಾರ್ಬನ್ ಕ್ರೆಡಿಟ್‌ಗಾಗಿ ಪ್ರಯತ್ನಿಸಬೇಕು.

ಎಥೆನಾಲ್ ಕ್ಷೇತ್ರದ ಶಿಫಾರಸ್ಸುಗಳು

28. ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡಲು ಬಳಸುವ ಎಥೆನಾಲ್ ಸಾಗಾಣಿಕೆಗಾಗಿ ಅಗತ್ಯವಿರುವ ಪರ್ಮಿಟ್ ನೀಡುವಿಕೆಯಲ್ಲಿನ ವಿಳಂಬವನ್ನು ಕಡಿಮೆ ಮಾಡುವುದು ಈ ಸಂಬಂಧ ಏಕಗವಾಕ್ಷಿ ಸಂಸ್ಥೆಯನ್ನು ರಚಿಸಲು ಕ್ರಮಕೈಗೊಳ್ಳುವುದು.  ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಅಬಕಾರಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆ.ಎಸ್.ಬಿ.ಸಿ.ಎಲ್.) ಸಂಸ್ಥೆಯಡಿ ಏಕಗವಾಕ್ಷಿ ಸಂಸ್ಥೆಯನ್ನು ನಿರ್ಮಿಸುವುದು.

29. ಡೀಸೆಲ್‌ನಲ್ಲಿ ಮಿಶ್ರಣ ಮಾಡುವ ಎಥೆನಾಲ್ ಬಳಕೆ ಪಾನೀಯವಲ್ಲದ ಹಾಗೂ ಕಾರ್ಖಾನೆ ಬಳಕೆಗೆ ಉಪಯೋಗಿಸುವ ವಸ್ತುವೆಂದು ಪರಿಗಣಿಸುವುದು. ಎಥೆನಾಲ್ ಡೋಪಿಂಗ್ ಲೈಸೆನ್ಸ್ ಅನ್ನು ತೈಲ ಪೋಗಳಿಗೆ ಹಾಗೂ ಡಿಸ್ಟಿಲರಿಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಒಂದು ವರ್ಷಗಳ ಬದಲಾಗಿ ಮೂರು ವರ್ಷಗಳ ಅವಧಿಗೆ ನೀಡುವುದು.

30. ಇಂಧನಕ್ಕೆ ಬಳಸುವ ಎಥೆನಾಲ್ ಅನ್ನು ರಾಜ್ಯದ ಹೊರಗಡೆ ಸಾಗಿಸಲು ಪ್ರಸ್ತುತ ಎರಡು ತಿಂಗಳುಗಳಿಗೆ ಮಾತ್ರ ರಾಜ್ಯ ಅಬಕಾರಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನೀಡಲಾಗುತ್ತದೆ. ಈ ನಿರಾಕ್ಷೇಪಣಾ ಪತ್ರವನ್ನು ಕನಿಷ್ಠ ತೈಲ ಕಂಪನಿಗಳೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದ ಅವಧಿಗೆ ನೀಡತಕ್ಕದ್ದು.ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ರಚನೆಯ ನಂತರ ಎರಡು ವರ್ಷಗಳವರೆಗೆ ಅಧ್ಯಯನ ನಡೆಸಿ, ದಿನಾಂಕ 01.03.2009 ರಂದು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಜೈವಿಕ ಇಂಧನ ನೀತಿ ರೂಪಿಸಿ ಜಾರಿಗೊಳಲಾಸಲಾಯಿತು. ಜೈವಿಕ ಇಂಧನ ಅಭಿವೃದ್ಧಿಗಾಗಿ ಕಾರ್ಯಪಡೆ ದಿನಾಂಕ 06.12.2010 ರಂದು ರಾಜ್ಯ ಸರ್ಕಾರಕ್ಕೆ ಮೇಲಿನ ಶಿಫಾರಸ್ಸುಗಳನ್ನು ಸಲ್ಲಿಸಿತು. ಇದರೊಂದಿಗೆ ಪರಿಣಾಮಕಾರಿ ಹಾಗೂ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಚನೆಯಾಯಿತು. ಕಾರ್ಯಪಡೆಯ ಶಿಫಾರಸ್ಸುಗಳನ್ನೆಲ್ಲಾ ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸುಪರ್ದಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ದಿನಾಂಕ 06.12.2010 ರಲ್ಲಿ ಕಾರ್ಯಪ್ರವೃತ್ತವಾಗಿದ್ದು, ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಧ್ಯೇಯೋದ್ದೇಶಗಳು

• ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಅನುಷ್ಠಾನಗೊಳಿಸುವುದು.
• ವಿವಿಧ ಪ್ರದೇಶಗಳಿಗೆ ಯೋಗ್ಯವಾದ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಕೃಷಿಯೇತರ ಭೂಮಿಯನ್ನು ಗುರುತಿಸುವುದು.
• ಜೈವಿಕ ಎಥನಾಲ್ ಉತ್ಪಾದನೆಗಾಗಿ ಕಬ್ಬು, ಬೀಟ್‌ರೂಟ್, ಗೋವಿನ ಜೋಳ ಮುಂತಾದ ಬೆಳೆಗಳ ಬೇಸಾಯವನ್ನು ಪ್ರೋತ್ಸಾಹಿಸುವುದು.
• ಜೈವಿಕ ಇಂಧನ ಮತ್ತು ಇತರೆ ಉಪ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹಿಸುವುದು.
• ಎಥನಾಲ್ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುವುದು.
• ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಸಮುದಾಯದ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು.
• ರೈತರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
• ಮೌಲ್ಯವರ್ಧನೆಗಾಗಿ ಬೀಜ ಸಂಗ್ರಹಣಾ ಜಾಲ ನಿರ್ಮಿಸುವುದು ಹಾಗೂ ಜೈವಿಕ ಇಂಧನ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು.
• ವಿಶ್ವವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಜೈವಿಕ ಇಂಧನ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿಸುವುದು.