Bio Energy Karnataka > ನಮ್ಮ ಬಗ್ಗೆ > ದಿಟ್ಟ ಹೆಜ್ಜೆಗಳ ಪುಟ್ಟ ಹಿನ್ನೆಲೆ

ದಿಟ್ಟ ಹೆಜ್ಜೆಗಳ ಪುಟ್ಟ ಹಿನ್ನೆಲೆ

ಪೀಠಿಕೆ

ಸ್ವಾತಂತ್ರ್ಯಾ ನಂತರ (1950-51ರಲ್ಲಿ) ರಾಷ್ಟ್ರದಲ್ಲಿ 3.5 ದಶಲಕ್ಷ ಮೆಟ್ರಿಕ್ ಟನ್ ಬಳಕೆಯಾಗುತ್ತಿದ್ದ ಕಚ್ಚಾ ತೈಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಪ್ರಸ್ತುತ 175 ದಶಲಕ್ಷ ಮೆಟ್ರಿಕ್ ಟನ್ ನಷ್ಟು ಬಳಕೆಯಾಗುತ್ತಿದೆ.  ಇಂದು ವಿಶ್ವದಲ್ಲಿ  ಅತೀ ಹೆಚ್ಚು ಕಚ್ಚಾ ತೈಲ ಬಳಸುವ ರಾಷ್ಟ್ರಗಳಾದ ಅಮೇರಿಕಾ, ಚೈನಾ, ರಷ್ಯಾ, ಜಪಾನ್ ದೇಶಗಳ ನಂತರ 5ನೇ ಸ್ಥಾನದಲ್ಲಿ ಭಾರತವೂ ಸೇರಿದೆ.  ನಮ್ಮ ಇಂದಿನ ಬೇಡಿಕೆಯ ಶೇ. 80 ರಷ್ಟು ವಿದೇಶದಿಂದ ಪೂರೈಸಿಕೊಳ್ಳಬೇಕಿರುವ ಅನಿವಾರ್ಯತೆಯಿದೆ.  1997-98 ನೇ ಸಾಲಿನಲ್ಲಿ ಆಮದು ಮಾಡಿಕೊಳ್ಳಬೇಕಿದ್ದ ಕಚ್ಚಾ ತೈಲ ಶೇ. 65 ರಷ್ಟಿದ್ದು, ಪ್ರಸ್ತುತ ಆಮದಿನ ಪ್ರಮಾಣ ಶೇ. 80 ಮೀರಿರುವುದು ಯೋಚನೆಗೀಡು ಮಾಡಿದೆ.  ಈ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಿರುವುದು ಶೇ. 20ರಷ್ಟು ಮಾತ್ರ. ಶೇ. 80ರಷ್ಟು ಪರಾವಲಂಬನೆಯಾಗಿರುವುದು ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಶುಭ ಸೂಚಕವಲ್ಲ.  ಈ ನಿಟ್ಟಿನಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದುವ ಮಾರ್ಗ ಕಂಡುಕೊಳ್ಳಲೇಬೇಕು.  ಜೊತೆಗೆ ವಿಶ್ವದ ಕಚ್ಚಾ ತೈಲದ ನಿಕ್ಷೇಪ ಮುಂಬರುವ 30 ವರ್ಷಗಳಲ್ಲಿ ಬರಿದಾಗುವ ಸೂಚನೆಯನ್ನು  ನಮ್ಮ ವಿಜ್ಞಾನಿಗಳು ನೀಡಿದ್ದಾರೆ. ಭಾರತದ ತೈಲ ನಿಕ್ಷೇಪ ಕೇವಲ 10 ವರ್ಷಗಳಿಗಾಗುವಷ್ಟು ಮಾತ್ರ ಲಭ್ಯವಿರುವದಾಗಿ ಊಹಿಸಿದ್ದಾರೆ.  ಆದ್ದರಿಂದ ಪರ್ಯಾಯ ಇಂಧನ ಸಂಪನ್ಮೂಲಗಳ ಅನ್ವೇಷಣೆ ಅತ್ಯಗತ್ಯವಾಗಿರುತ್ತದೆ.  ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸಬಲ್ಲ ಏಕೈಕ ಆಶಾಕಿರಣವಾಗಿದೆ.

ಶೇ. 80 ರಷ್ಟು ರಾಷ್ಟ್ರದ ಬೇಡಿಕೆಯ ತೈಲ ಪೂರೈಕೆ  ಕೊಲ್ಲಿ ರಾಷ್ಟ್ರಗಳಾದ ಇರಾನ್, ಇರಾಕ್, ದುಬೈ, ಕಟರ್ ನಂತಹ ಓ.ಪಿ.ಇ.ಸಿ. (OPEC) ರಾಷ್ಟ್ರಗಳಿಂದ ಆಗುತ್ತಿದೆ.  ಇದರಿಂದ ರಾಷ್ಟ್ರ ಎರಡು ವಿಧದ ಅಪಾಯಕ್ಕೆ ಸಿಲುಕಬಹುದಾಗಿದೆ. ಮೊದಲನೆಯದು ಅಪಾರ ಬೇಡಿಕೆಯನ್ನು ಪೂರೈಸಲು ತೆರಬೇಕಿರುವ ವಿದೇಶಿ ವಿನಿಮಯವಾದರೆ, ಎರಡನೆಯದು ಎಷ್ಟೇ ಹಣ ಕೊಟ್ಟರೂ ಸಹ ಓಪಿಇಸಿ ರಾಷ್ಟ್ರಗಳು ನಮ್ಮ ರಾಷ್ಟ್ರಕ್ಕೆ ರಪ್ತು ಮಾಡಲು ಒಪ್ಪದಿದ್ದಲಿ, ರಾಷ್ಟ್ರದ ಕೈಗಾರಿಕೆಯ ಮೇಲೆ ಹಾಗೂ ಸಾರಿಗೆ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದು. ಕೈಗಾರಿಕೆಗಳು ತಟಸ್ಥವಾಗಬಲ್ಲವು.  ಪರಿಣಾಮ ಕೈಗಾರಿಕೆಗಳಿಂದ ರಫ್ತು ನಿಲ್ಲಬಹುದು. ನಿರುದ್ಯೋಗ ಬೆಳೆಯಬಹುದು. ಇದರಿಂದಾಗಿ ಮುಂದೊಮ್ಮೆ ನಾವು ಆರ್ಥಿಕ ದಿವಾಳಿತನಕ್ಕೆ ಸಿಲುಕಬಹುದಲ್ಲವೆ ? ಒಮ್ಮೆ ಯೋಚಿಸಿ ನೋಡಿ. ಈ ಸಂಕಷ್ಟದ ದಿನಗಳನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯ ನಮ್ಮ ರಾಷ್ಟ್ರಕ್ಕಿದೆ, ಆ ಸಾಮರ್ಥ್ಯ ರಾಜ್ಯದ ರೈತರಿಗಿದೆ. ಆ ಸಮಯ ಎದುರಿಸಲು ಸನ್ನದ್ಧರಾಗಬೇಕಿದೆ. ಅದುವೇ ಜೈವಿಕ ಇಂಧನ ಕೃಷಿ.

ಬೀಜ ಸಂಸ್ಕರಣೆ, ಎಣ್ಣೆ ತೆಗೆಯುವಿಕೆ ಮತ್ತು ಜೈವಿಕ ಡೀಸೆಲ್ ತಯಾರಿಕೆ ಹಾಗೂ ವಿವಿಧ ರೀತಿಯ ಮೌಲ್ಯವರ್ಧನೆ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶದಲ್ಲೇ ಮಾಡಬಹುದಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಯ ಅವಕಾಶಗಳನ್ನು ಹೆಚ್ಚಿಸುವುದಲ್ಲದೇ, ರೈತರಿಗೆ ಹೆಚ್ಚುವರಿ ಆದಾಯ ತರಬಲ್ಲದು. ಗ್ರಾಮೀಣ ಪ್ರದೇಶದ ಇಂಧನದ ಅವಶ್ಯಕತೆಯನ್ನು ಅಲ್ಲೇ ತಯಾರಾದ ಇಂಧನಗಳಿಂದ ಪೂರೈಸಿ, ಹೆಚ್ಚುವರಿ ಇಂಧನವನ್ನು ಮಾರಾಟ ಮಾಡಬಹುದಾಗಿದೆ.

ಜೈವಿಕ ಇಂಧನ ಸಸಿಗಳನ್ನು ಕೃಷಿಗೆ ಯೋಗ್ಯವಾಗಿರದ ರಾಜ್ಯದ 13.5 ಲಕ್ಷ ಹೆಕ್ಟೇರ್ ಬರಡು, ಬಂಜರು ಭೂ ಪ್ರದೇಶಗಳಲ್ಲಿ, ನದಿ, ಕಾಲುವೆ, ಹಾಗೂ ರೈತರ ಜಮೀನುಗಳ ಬೇಲಿ, ಬದುಗುಂಟ, ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಳೆಸಬಹುದಾಗಿದೆ.  ಬಯಲು ಸೀಮೆ ಹಾಗೂ ಕಡಿಮೆ ಮಳೆಯಾಗುವ ಭೂ ಪ್ರದೇಶಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಸುಲಭವಾಗಿ ಬೆಳೆಸಬಹುದಾಗಿದೆ. ಅರಣ್ಯೀಕರಣದ ಜೊತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಉತ್ತಮ ಸಾವಯವ ಗೊಬ್ಬರದ ಜೊತೆಗೆ ರಾಷ್ಟ್ರದ ಇಂಧನ ಸುರಕ್ಷತೆಗೆ ಭದ್ರ ಬುನಾದಿ ಹಾಕಬಹುದಾಗಿದೆ.

ಕರ್ನಾಟಕದಲ್ಲಿ ಜೈವಿಕ ಇಂಧನ ಹಿನ್ನೆಲೆ

ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕುರಿತ ಅಧ್ಯಯನವು ಸುಮಾರು ಎರಡು ದಶಕಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ಸೂತ್ರ ವಿಭಾಗದಿಂದ(Sustainable Transformation of Rural Area SuTRA) ಪ್ರಾರಂಭವಾಗಿತ್ತು. ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ಹೋಬಳಿಯ ಪುರ, ಉಂಗ್ರ, ಸುಗ್ಗೇನಹಳ್ಳಿ, ಕಗ್ಗೇನಹಳ್ಳಿ ಇತ್ಯಾದಿಯಾಗಿ ಸುಮಾರು 15 ವಿದ್ಯುತ್ ರಹಿತ ಕುಗ್ರಾಮಗಳಲ್ಲಿ ಜೈವಿಕ ಇಂಧನ (ಹೊಂಗೆ ಎಣ್ಣೆ) ದಿಂದ ವಿದ್ಯುತ್ ಉತ್ಪಾದಿಸಿ, ಬೀದಿ ದೀಪ, ಗೃಹಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜಿಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿ ಯಶಸ್ವಿಯಾದರು. ನಂತರದ ದಿನಗಳಲ್ಲಿ ಸೂತ್ರದ ವಿಜ್ಞಾನಿಗಳು ಸಹಯೋಗದೊಂದಿಗೆ ಜೈವಿಕ ಇಂಧನ ಬಳಕೆಯ ಬಗ್ಗೆ ದೂರದೃಷ್ಟಿ ಹೊಂದಿದ ಸಮಗ್ರ ವಿಕಾಸ ಎಂಬ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀ. ವೈ.ಬಿ.ರಾಮಕೃಷ್ಣ ಅವರು ಹಲವಾರು ಕಾರ್ಯ ಕೈಗೊಂಡು ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಪೂರಕವೆನಿಸುವ ಜೈವಿಕ ಇಂಧನದ ಬಳಕೆಗೆ ಪ್ರೇರಣೆ ನೀಡಿದರು. 2002 ರ ಜೂನ್‌ನಲ್ಲಿ ಸಮಗ್ರ ವಿಕಾಸದ ವತಿಯಿಂದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜೈವಿಕ ಇಂಧನ – ಸಾಧ್ಯತೆ ಬಾಧ್ಯತೆಗಳ ಬಗೆಗೆ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಮಾನ್ಯ ಶ್ರೀ ಅಣ್ಣಾ ಸಾಹೇಬ್ ಎಂ.ಕೆ. ಪಾಟೀಲ್ ಅವರು ಈ ವಿಚಾರ ಸಂಕಿರಣವೊಂದನ್ನು ಪಾಲ್ಗೊಂಡು, ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ನೀತಿ ರೂಪಿಸುವ ಅಗತ್ಯವನ್ನು ನಿರೂಪಿಸಿದರು. ಇದಕ್ಕೆ ಅಗತ್ಯವಾದ ಮಾಹಿತಿಯನ್ನು ಒದಗಿಸುವಂತೆ ಅವರು ಸೂಚಿಸಿದರು.

ಇದರ ಪರಿಣಾಮ ಸಮಗ್ರ ವಿಕಾಸ – ಹಾಗೂ ಭಾರತೀಯ ವಿಜ್ಞಾನ ಮಂದಿರದ ಸೂತ್ರ ಘಟಕದ ಸಹಯೋಗದಲ್ಲಿ 40 ಜನ ತಜ್ಞರ ಸದಸ್ಯರ ಸಲಹಾ ಸಮಿತಿ ರಚಿತವಾಯಿತು. ಈ ಸಮಿತಿಯು ತಯಾರಿಸಿದ ಕರಡು ನಿರೂಪಣೆಯನ್ನು ದೇಶದಾದ್ಯಂತ 600 ಕ್ಕೂ ಹೆಚ್ಚು ವಿವಿಧ ತಜ್ಞರಿಗೆ, ಸಂಸ್ಥೆಗಳಿಗೆ ಕಳುಹಿಸಿ ಅವರುಗಳ ಅಭಿಪ್ರಾಯ ಸಂಗ್ರಹಿಸಿ, ದಾಖಲೆ ಸಿದ್ಧಪಡಿಸಲಾಯಿತು. ಈ ನೀತಿ ನಿರೂಪಣೆಯ ಕರಡನ್ನು ಚರ್ಚಿಸಲು ‘ಸೂತ್ರ’ ಹಾಗೂ ‘ಸಮಗ್ರ ವಿಕಾಸ’ಗಳ ಜಂಟಿ ಸಂಘಟನೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಒಂದು ವಿಚಾರ ಸಂಕಿರಣ (2003) ನಡೆಯಿತು. ಇದು ರಾಷ್ಟ್ರ ಮಟ್ಟದಲ್ಲಿ ಜೈವಿಕ ಇಂಧನ ಕ್ಷೇತ್ರಕ್ಕೆ ಚಾಲನೆ ನೀಡಿತು. ಕೇಂದ್ರ ಸರ್ಕಾರದ ಅಂದಿನ ಪೆಟ್ರೋಲಿಯಮ್ ಸಚಿವರಾದ ಶ್ರೀ ರಾಮ್ ನಾಯಕ್ ಅವರು ಸಕ್ರಿಯವಾಗಿ ಈ ಸಮ್ಮೇಳನದಲ್ಲಿ ಭಾಗವಹಿಸಿ, ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ಕರಡು ಶಿಫಾರಸ್ಸನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಈ ಸಮ್ಮೇಳನದಲ್ಲಿ ಜೈವಿಕ ಇಂಧನ ಕುರಿತು ಸುಧೀರ್ಘ ಚರ್ಚೆ ನಡೆಸಿ ಇದರ ಅಗತ್ಯವನ್ನು ಪ್ರತಿಪಾದಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಾಯಿತು.

ಈ ಶಿಫಾರಸ್ಸುಗಳ ಅಂಶಗಳನ್ನು ಕೇಂದ್ರ ಸರ್ಕಾರದ ಯೋಜನಾ ಆಯೋಗದ ಡಾ|| ದೀನಾನಾಥ್ ತಿವಾರಿ ಅವರ ನೇತೃತ್ವದಲ್ಲಿ ರೂಪಿಸಿದ ಜೈವಿಕ ಇಂಧನ ಕಾರ್ಯಕ್ರಮದಲ್ಲಿ ಅಳವಡಿಸುವ ಮೂಲಕ ಕೇಂದ್ರ ಸರ್ಕಾರದಲ್ಲಿ ಈ ಕುರಿತು ಅಧ್ಯಯನ ಪ್ರಾರಂಭವಾಯಿತು. ಜೊತೆಗೇ ಬಯೋ ಡಿಸೇಲ್ ಮಿಷನ್ ಎಂಬ ಕಾರ್ಯಕ್ರಮವೂ ಪ್ರಾರಂಭವಾಯಿತು. ಹೀಗೆ ಕರ್ನಾಟಕದಲ್ಲಿ ಕೈಗೊಂಡ ಜೈವಿಕ ಇಂಧನದ ಅಧ್ಯಯನ ರಾಷ್ಟ್ರದ ಜೈವಿಕ ಇಂಧನ ನೀತಿ ರೂಪಿಸುವಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ ಎನ್ನುವಲ್ಲಿ ಸಂದೇಹವಿಲ್ಲ.

ರಾಜ್ಯದ ಜೈವಿಕ ಇಂಧನ ಉತ್ಪಾದನೆಯು ಏಳು ದಶಕಗಳ ಇತಿಹಾಸ ಹೊಂದಿದೆ. ಎರಡನೇ ಜಾಗತಿಕ ಮಹಾ ಯುದ್ಧದ ಸಂದರ್ಭದಲ್ಲಿ ಪೆಟ್ರೋಲಿನ ಕೊರತೆಯುಂಟಾದಾಗ ಮುಂಬೈನ ಬೆಸ್ಟ್ (Best)  ಬಸ್‌ಗಳ ಚಾಲನೆಗಾಗಿ ಮೈಸೂರು ಸಕ್ಕರೆ ಕಾರ್ಖಾನೆಯಿಂದ ಎಥೆನಾಲನ್ನು ಸರಬರಾಜು ಮಾಡಲಾಗಿತ್ತು. ಇದಕ್ಕೆ ‘ಪವರ್ ಪೆಟ್ರೋಲ್’ ಎಂಬ ಹೆಸರಿತ್ತು.

ರಾಜ್ಯದ ‘ಮಿಲೆನಿಯಮ್ ಬಯೋಟೆಕ್ ಪಾಲಿಸಿ 2001’ ರಲ್ಲಿ ಜೈವಿಕ ಇಂಧನ (ಬಯೋ ಎಥನಾಲ್) ಒಳಗೊಂಡಿರುವುದು ರಾಷ್ಟ್ರದಲ್ಲಿ ಅಧಿಕೃತವಾಗಿ ಜೈವಿಕ ಇಂಧನ ಕುರಿತು ಸರ್ಕಾರದಿಂದ ಪ್ರಕಟಿಸಿದ ಪ್ರಥಮ ದಾಖಲೆಯಾಗಿದೆ.

ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರೀ ಯಡಿಯೂರಪ್ಪ ಅವರ ಪ್ರಗತಿಪರ ನಿಲುವಿನಿಂದಾಗಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಜೈವಿಕ ಇಂಧನ ಕಾರ್ಯಪಡೆಯನ್ನು ಸೆಪ್ಟೆಂಬರ್ 2008 ರಲ್ಲಿ ಶ್ರೀ ವೈ.ಬಿ.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.