Bio Energy Karnataka > ಯೋಜನೆಗಳು > ಸಂಶೋಧನೆ ಚಟುವಟಿಕೆ

ಸಂಶೋಧನೆ ಚಟುವಟಿಕೆ

ಜೈವಿಕ ಇಂಧನ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಮೌಲ್ಯವರ್ಧಿತ ಚಟುವಟಿಕೆಗಳಿಗಾಗಿ ಸಸಿನೆಡುವ ಹಾಗೂ ಸಂಸ್ಕರಣೆ ಕಾರ್ಯದೊಂದಿಗೆ ಸಂಶೋಧನೆ ಕಾರ್ಯವೂ ಸಹ ಮಹತ್ವದ್ದೆನಿಸಿದೆ. ಸ್ಥಳೀಯ ಅಗತ್ಯತೆಗಳನ್ನು ಪೂರೈಸುವ ರೈತರ ಆರ್ಥಿಕಾಭಿವೃದ್ಧಿಗಾಗಿ ಕಾರ್ಯಪಡೆ ಹಾಗೂ ನಂತರದ ದಿನಗಳಲ್ಲಿ ಮಂಡಳಿ ಸತತವಾಗಿ ಪ್ರೋತ್ಸಾಹಿಸುತ್ತಿದೆ. ಸಂಶೋಧನಾ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಕೆಳಗಿನ ಕ್ರಮ ಕೈಗೊಳ್ಳಲಾಗಿದೆ.

i. ವಿವಿಧ ತಾಂತ್ರಿಕ ಕಾಲೇಜುಗಳು, ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗಗಳು, ಕೃಪಿ ವಿಶ್ವ ವಿದ್ಯಾಲಯಗಳಲ್ಲಿ ಜೈವಿಕ ಇಂಧನ ಕ್ಷೇತ್ರದ ಸಂಶೋಧನೆಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗುತ್ತದೆ.

ii. ಸಂಶೋಧನಾತ್ಮಕ ಚಟುವಟಿಕೆಯ ಯೋಜನಾ ವರದಿ ಮತ್ತು ಮಾರ್ಗದರ್ಶನಕ್ಕಾಗಿ ಕೆ.ಎಸ್.ಸಿ.ಎಸ್.ಟಿ ಯಲ್ಲಿ ಜೈವಿಕ ಇಂಧನ ಕೋಶದ ಸ್ಥಾಪನೆ.

iii. ಜೈವಿಕ ಇಂಧನ ಉತ್ಪಾದನಾ ಉಪಕರಣಗಳ ಅಭಿವೃದ್ಧಿ ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳ ಅಭಿವೃದ್ಧಿಗಾಗಿ ಪ್ರೋತ್ಸಾಹಿಸುತ್ತಿದೆ.

iv. ಜೈವಿಕ ಇಂಧನ ಉದ್ಯಾನದ ಸಂಶೋಧನಾ ಕಾರ್ಯಗಳಿಗೆ ಸಂಪೂರ್ಣ ನೆರವು.

v. ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳಿಂದ ಸಂಶೋಧನಾ ಯೋಜನೆ ಸಿದ್ಧಪಡಿಸಿ, ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಪಡೆಯುವಲ್ಲಿ ಸಹಕಾರಿಯಾಗಲು ವಿಶೇಷ ಕಾರ್ಯಗಾರಗಳ ಆಯೋಜನೆ.

P-12

ಈ ಎಲ್ಲಾ ಪ್ರಯತ್ನಗಳಿಂದಾಗಿ ಕೆಳಗಿನ ಸಂಶೋಧನೆ ಕಾರ್ಯಗಳು ನಡೆದಿವೆ:

೧. ಕೆ.ಎಸ್.ಸಿ.ಎಸ್.ಟಿ ಯ ವಿದ್ಯಾರ್ಥಿಗಳ ಪ್ರಾಜೆಕ್ಟ್ ಕಾರ್ಯಗಳಡಿ ೨೨ ತಾಂತ್ರಿಕ ಕಾಲೇಜುಗಳ ತಲಾ ವಿದ್ಯಾರ್ಥಿಗಳಿಗೆ ರೂ.೧೦,೦೦೦/- ರಂತೆ ಹಾಗೂ ೯ ಸ್ನಾತಕೋತ್ತರ ತಾಂತ್ರಿಕ ವಿದ್ಯಾರ್ಥಿಗಳಿಗೆ ತಲಾ ರೂ.೨೦,೦೦೦/- ರಂತೆ ಆರ್ಥಿಕ ನೆರವು ನೀಡುವ ಕಾರ್ಯಕೈಗೊಡಿದೆ (೨೦೧೨-೧೩ನೇ ಸಾಲಿನಿಂದ).

೨. ಎಮ್.ಜಿ.ಆರ್.ಇ.ಡಿ ಸಂಸ್ಥೆಯಿಂದ ೨೦೧೦ ನೇ ಸಾಲಿನಲ್ಲಿ ೬ ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ೨ ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಕೈಗೊಂಡು, ಒಟ್ಟು ೮ ಜೈವಿಕ ಇಂಧನದ ೮ ಸಂಶೋಧನಾ ಕಾರ್ಯ ಕೈಗೊಳ್ಳಲಾಗಿದೆ.

೩. ಕೃಷಿ ವಿಶ್ವ ವಿದ್ಯಾಲಯ ಧಾರವಾಡದಿಂದ ಕೆಳಗಿನ ಸಂಶೋಧನಾ ಕಾರ್ಯಗಳು. ಜಟ್ರೋಫಾ ಸಸಿಗಳ ಕುಡಿ ಕತ್ತರಿಸುವುದರಿಂದ ಸಸಿ ಬೆಳವಣಿಗೆ ಮೇಲಾಗುವ ಪರಿಣಾಮ. ಸಿಮರೂಬಾ ಸಸ್ಯದ ಅಧ್ಯಯನ ಹಾಗೂ ವಿಸ್ತರಣಾ ಚಟುವಟಿಕೆ. ಜಟ್ರೋಫಾ ಹಾಗೂ ಹೊಂಗೆ ಸಸಿಗಳ ಕುಡಿ ವಿವಿಧ ಎತ್ತರದಲ್ಲಿ ಕತ್ತರಿಸಿದಲ್ಲಿ ಸಸಿ ಬೆಳವಣಿಗೆ ಮೇಲಾಗುವ ಪರಿಣಾಮ.

೪. ಕೃಷಿ ವಿಶ್ವ ವಿದ್ಯಾಲಯ ರಾಯಚೂರು ಅವರಿಂದ ಉಷ್ಣವಲಯದಲ್ಲಿ  ಬೇವು, ಸಿಮರೂಬ, ಜಟ್ರೋಪ ಸಸಿಗಳ ಬೆಳೆಯುವಿಕೆ ಮೇಲಾಗುವ ಪರಿಣಾಮಗಳ ಸಂಶೋಧನೆ.

೫. ಗುಲ್ಬರ್ಗಾ ವಿಶ್ವ ವಿದ್ಯಾಲಯದ ಬಯೋ ಟೆಕ್ನಾಲಜಿ ವಿಭಾಗದಲ್ಲಿ ಕಬ್ಬಿನ ಸಿಪ್ಪೆಯಿಂದ ಎಥೆನಾಲ್ ತಯಾರಿಕೆ ಕುರಿತು ಸಂಶೋಧನೆ.

೬. ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜೈವಿಕ ಇಂಧನದ ಉತ್ಪಾದನೆಯಲ್ಲಿ ದೊರಕುವ ಹಿಂಡಿಯಿಂದ ಜೈವಾನಿಲ (ಅಡುಗೆ ಅನಿಲ) ಉತ್ಪಾದನೆ ಕುರಿತು ಸಂಶೋಧನೆ.

೭. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕೆಳಗಿನ ಸಂಶೋಧನೆಗಳು. ಸಾರಿಗೆ ಬಸ್‌ಗಳಲ್ಲಿ ೭.೭% ಎಥೆನಾಲ್ ಮಿಶ್ರಿತ ಡೀಸೆಲ್‌ನ ಬಳಕೆಯ ಪ್ರಯೋಗ ಹಾಗೂ ಅಳವಡಿಕೆ. ಬಸ್‌ಗಳಲ್ಲಿ B5,B10,B20,B100 ಪ್ರಮಾಣದಲ್ಲಿ ಜೈವಿಕ ಡೀಸೆಲ್ ಬಳಕೆ ಸಂಶೋಧನೆ ಹಾಗೂ ಅಳವಡಿಕೆ.

೮. ಕಾರವಾರದ ಕಾಲೇಜ್ ಆಫ್ ಫಿಷರಿಸ್‌ನಲ್ಲಿ ಮೀನಿನ ಎಣ್ಣೆಯಿಂದ ಒಮೇಗಾ-೩ ಫ್ಯಾಟಿ ಆಸಿಡ್ ತಯಾರಿಕೆ ಹಾಗೂ ಜೈವಿಕ ಡೀಸೆಲ್ ಉತ್ಪಾದನೆ.

೯. ಗೇರು ಹಣ್ಣಿನಿಂದ ಎಥೆನಾಲ್ ಉತ್ಪಾದನೆ.

೧೦. ರಬ್ಬರ್ ಬೀಜದಿಂದ ಜೈವಿಕ ಡೀಸೆಲ್ ಉತ್ಪಾದನೆ.

೧೧. ಅಡಿಕೆ ಸಿಪ್ಪೆ, ಕಾಫಿ ಸಿಪ್ಪೆಯಿಂದ, ಪುಡಿ ತ್ಯಾಜ್ಯದಿಂದ ಎಥೆನಾಲ್ ಉತ್ಪಾದನೆಯಲ್ಲಿ ಸಂಶೋಧನೆ ಕಾರ್ಯ ಉಡುಪಿ ಜಿಲ್ಲೆಯ ನಿಟ್ಟೆ ತಾಂತ್ರಿಕ ಕಾಲೇಜಿನಿಂದ ನಡೆಯುತ್ತಿದೆ.

೧೨. ಪ್ಲಾಸ್ಟಿಕ್, ರಬ್ಬರ್, ಟಾಯರ್, ಟ್ಯೂಬ್‌ಗಳಿಂದ ಹಾಗೂ ಮುನಿಸಿಪಲ್ ವೇಸ್ಟ್‌ನಿಂದ ಜೈವಿಕ ಡೀಸೆಲ್ ಉತ್ಪಾದನೆ ಕ್ಷೇತ್ರಗಳಲ್ಲಿ ವಿವಿಧ ಸಂಶೋಧನೆ ರಾಜ್ಯದ ತಾಂತ್ರಿಕ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಹಾಗೂ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ.